ಮೀರಾಬಾಯಿ
 	1498-1546. ಹಿಂದೀ ಕವಯಿತ್ರಿ ಹಾಗೂ ಕೃಷ್ಣಭಕ್ತೆ. ಮೇವಾಡದ ಮೇಡತಾ ಜನ್ಮಸ್ಥಳ. ಈಕೆ ಅಲ್ಲಿಯ ರಾಠೌರ ರತ್ನಸಿಂಹನ ಮಗಳು. ರಾವ್‍ದೂದಾನ ಮೊಮ್ಮಗಳು ಮತ್ತು ಜೋಧಪುರದ ಸಂಸ್ಥಾಪಕ ರಾವ್ ಜೋಧಜಿಯ ಮರಿಮಗಳು. ಮಗುವಾಗಿದ್ದಾಗಲೇ ತಾಯಿ ತೀರಿಕೊಂಡಳು. ಅಜ್ಜ ರಾವ್ ದೂದಾಜಿ ಮೇಡತಾದಲ್ಲಿ ಈಕೆಯನ್ನು ಸಾಕಿ ಸಲಹಿದ. 12ನೆಯ ವಯಸ್ಸಿನಲ್ಲೇ ಮೇವಾಡದ ರಾಜಕುಮಾರ ಭೋಜರಾಜನಿಗೆ ಈಕೆಯನ್ನು ಕೊಟ್ಟು ಮದುವೆ ಮಾಡಲಾಯಿತು. ಭೋಜರಾಜ ಮೇವಾಡದ ದೊರೆ ರಾಣಾಸಿಂಹದ ಹಿರಿಯ ಮಗ. ಮೀರಾಳ ದಾಂಪತ್ಯಜೀವನ ಇನ್ನೇನು ಚಿಗುರೊಡೆಯಬೇಕು ಎನ್ನುವಾಗಲೇ ವಿಧಿ ಈಕೆಗೆ ವೈಧವ್ಯ ನೀಡಿತು. ಅನಂತರ ತಂದೆ ಕೂಡ ಯುದ್ಧದಲ್ಲಿ ಮಡಿದ. ಅದರ ಮುಂದಿನ ವರ್ಷ ಮಾವನೂ ತೀರಿಕೊಂಡ.

	ಮಾತೃವಿಯೋಗ, ಪತಿವಿಯೋಗ, ಪಿತೃವಿಯೋಗ, ಮಾತಾಮಹವಿಯೋಗ ಹೀಗೆ ಒಂದರಮೇಲೊಂದರಂತೆ ಎರಗಿದ ವಿಪತ್ಪರಂಪರೆಗಳಿಂದ ಮೀರಾಳಿಗೆ ಐಹಿಕ ಜೀವನದಲ್ಲಿ ಜಿಹಾಸೆಯುಂಟಾಯಿತು. ಚಿಕ್ಕಂದಿನಿಂದಲೂ ಮೀರಾ ಕೃಷ್ಣನನ್ನು ಕಾಂತಾಭಾವದಿಂದ ಭಜಿಸುತ್ತಿದ್ದಳು. ಆ ಸಮಯದಲ್ಲಿ ಈಕೆಗೆ ಭಕ್ತಿಯೇ ಊರುಗೋಲಾಯಿತು. ರಾಜವೈಭವದಿಂದ ದೂರವಾಗಿ ಮೀರಾ ಕೃಷ್ಣನ ಪ್ರಜೆ ಧ್ಯಾನಭಜನೆಗಳಲ್ಲಿ ದಿನ ಕಳೆಯತೊಡಗಿದಳು. ಕರತಾಳ ಹಿಡಿದು ಕೃಷ್ಣನ ಮೂರ್ತಿಯ ಮುಂದೆ ನಿಂತು ಗಂಟೆಗಟ್ಟಳೆ ಹಾಡುತ್ತ ಕುಣಿಯತೊಡಗಿದಳು. ಕೃಷ್ಣ-ಪ್ರೇಮದ ನೂರಾರು ಹಾಡುಗಳನ್ನು ಕಟ್ಟಿ ಹಾಡತೊಡಗಿದಳು. ಈಕೆಯ ಬಳಿಗೆ ಸಾಧು-ಸಚಿತರು ಹೆಚ್ಚಾಗಿ ಬರತೊಡಗಿದರು. ಅವರೆದುರಿಗೆ ಮೀರಾ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತ ಹಾಡುತ್ತ ಪರವಶಳಾಗುತ್ತಿದ್ದಳು. ಮೀರಾಳ ಮೈದುನ ವಿಕ್ರಮಜೀತಸಿಂಹ ಎಂಬಾತ ಆಗ ಮೇವಾಡದ ರಾಜನಾಗಿದ್ದ. ತನ್ನ ಅರಮನೆಯ ಮಾನ ಮೀರಾಬಾಯಿಯಿಂದಾಗಿ ಬೀದಿಪಾಲಾಗುತ್ತಿದ್ದುದನ್ನು ಕಂಡು ಆತ ಈಕೆಯನ್ನು ಹಾದಿಗೆ ತರಲು ಯತ್ನಿಸಿದ. ಆದರೆ ಎಲ್ಲವೂ ವ್ಯರ್ಥವಾಯಿತು. ಆತ ಈಕೆಗೆ ಕುಡಿಯಲು ತೀರ್ಥವೆಂದು ಹೇಳಿ ವಿಷ ಕಳಿಸಿದ. ಮೀರಾ ಅದನ್ನು ಗಟಗಟನೆ ಕುಡಿದಳು. ವಿಷ ಪ್ರಭುಚರಣಾಮೃತವಾಯಿತು. ಮತ್ತೊಮ್ಮೆ ಆತ ಪೆಟ್ಟಿಗೆಯಲ್ಲಿ ಹಾವುಗಳನ್ನು ತುಂಬಿ ಪ್ರಸಾದವೆಂದು ಕಳಿಸಿಕೊಟ್ಟ. ಭಗವದನುಗ್ರಹದಿಂದ ಹಾವುಗಳು ಸಾಲಿಗ್ರಾಮಗಳಾಗಿದ್ದುವು.

	ಕುಟುಂಬದವರ ಕಿರುಕುಳ ತಾಳಲಾರದೆಯೇ ಮೀರಾ ತುಳಸೀದಾಸರಿಗೆ ಒಂದು ಕಾಗದ ಬರೆದಳಂತೆ. ಆಗ ತುಳಸೀದಾಸರು ಜಾಕೇ ಪ್ರಿಯನ ರಾಮ ವೈದೇಹಿ ಸೋ ನರ ತರಿಯ ಕೋಟೆಬೈರಿ ಸಮದ್ಯಪಿ ಪರಮಜ ನೇಹಿ|| ಯಾರಿಗೆ ಸೀತಾ ರಾಮರು ಪ್ರಿಯರಲ್ಲವೋ ಅವರು ಪರಮಸ್ನೇಹಿತರಾಗಿದ್ದರು ಕೂಡ ಅವರನ್ನು ಕೋಟಿ ವೈರಿಗಳಿಗೆ ಸಮಾನರಂತೆ ಪರಿಗಣಿಸಿ ಪರಿತ್ಯಜಿಸಬೇಕು ಎಂಬ ಅರ್ಥ ಬರುವಂತೆ ಬರೆದು ಕಳುಹಿಸಿದರಂತೆ.

	ಮೀರಾಬಾಯಿಗೆ ಏನೋ ಬರಬಾರದ ರೋಗ ಬಂದಿದೆಯೆಂದು ಭಾವಿಸಿ ಚಿಕಿತ್ಸೆಗಾಗಿ ದೊಡ್ಡ ದೊಡ್ಡ ವೈದ್ಯರನ್ನು ಕರೆದು ತೋರಿಸಿದರಂತೆ. ಆಗ ಮೀರಾ ಹೇಳಿದಳಂತೆ-ನಾನು ಪ್ರೇಮರೋಗಿ. ಪ್ರೇಮೋನ್ಮಾದ ನನಗೆ ಹತ್ತಿದೆ. ಅದನ್ನು ನಿವಾರಿಸಬಲ್ಲ ವೈದ್ಯ ಶ್ಯಾಮನೊಬ್ಬನೇ. ನೊಂದವರ ನೋವನ್ನು ನೀವೇನು ಬಲ್ಲಿರಿ? ಈ ನೋವಿನಿಂದ ಬೆಂದು ವೈದ್ಯರನ್ನು ಹುಡುಕಿಕೊಂಡು ನಾನು ವನವನವನ್ನೆಲ್ಲ ಸುತ್ತಿದ್ದೇನೆ. ಆದರೆ ವೈದ್ಯ ಕಾಣಲಿಲ್ಲ. ಶ್ಯಾಮಸುಂದರನೆಂಬ ವೈದ್ಯ ಬಂದಾಗಲೇ ನನ್ನ ರೋಗ ಪರಿಹಾರ ಎಂಬುದಾಗಿ. ಇದನ್ನು ಕೇಳಿ ವೈದ್ಯರು ಬಂದ ದಾರಿ ಹಿಡಿದರಂತೆ.

	ಮೀರಾಬಾಯಿ ರಾಜಸ್ಥಾನವನ್ನು ತೊರೆದು ಬೃಂದಾವನಕ್ಕೆ ಗಿರಿಧರ ಗೋಪಾಲನನ್ನು ಆರಿಸಿಕೊಂಡು ಹೋದಳು. ಬೃಂದಾವನ ಆಗ ವಿವಿಧ ವೈಷ್ಣವಪಂಥಗಳ ಸಂಗಮವಾಗಿ ಅಲ್ಲೊಂದು ಕುರುಕ್ಷೇತ್ರವೇ ನಡೆಯುತಿತ್ತು. ಅವರವರಲ್ಲೇ ಕಚ್ಚಾಟ ಮೇಲಾಟಗಳು ನಡೆದಿದ್ದವು. ಕೊನೆಗೆ ಮೀರಾಬಾಯಿಗೆ ಬೃಂದಾವನದ ಬಾಳು ಬೇಸರವಾಯಿತು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ದಂಭಾಚಾರ ಕಂಡು ಬೇಸತ್ತ ಮೀರಾ ಬೃಂದಾವನವನ್ನು ತೊರೆದು ದ್ವಾರಕೆಗೆ ಬಂದಳು. ದ್ವಾರಕಾ ಕೃಷ್ಣನ ಕರ್ಮಭೂಮಿ. ಅಲ್ಲಿ ರಣಛೋಡಜೀ ಎಂಬ ಹೆಸರಿನಿಂದ ಕೃಷ್ಣನ ಪೂಜೆ ಸಲ್ಲುತ್ತದೆ. ರಾಮೇಶ್ವರಕ್ಕೆ ಹೋದರೂ ಶನಿಕಾಟ ತಪ್ಪಲಿಲ್ಲ ಎಂಬಂತೆ ಅಲ್ಲಿಯೂ ಮೀರಾಬಾಯಿಗೆ ಗಂಡನ ಕಡೆಯವರ ಕಾಟ ತಪ್ಪಲಿಲ್ಲ. 1546ರಲ್ಲಿ ಒಂದು ದಿನ ಮೀರಾಬಾಯಿ ? ಸಿಂಗರಿಸಿಕೊಂಡು ದಿವ್ಯೋನ್ಮಾದದಲ್ಲಿ ಕುಣಿದು ಹಾಡುತ್ತ ರಣಛೋಡಜಿಯ ಮೂರ್ತಿಯಲ್ಲಿ ಐಕ್ಯಳಾದಳೆಂದು ಹೇಳುತ್ತಾರೆ.

	ಈಕೆಯ ಜೀವನಕ್ಕೂ ಕನ್ನಡನಾಡಿನಲ್ಲಿ 12ನೆಯ ಶತಮಾನದಲ್ಲಿ ಆಗಿಹೋದ ವಚನಕಾರ್ತಿ ಅಕ್ಕಮಹಾದೇವಿಯ ಜೀವನಕ್ಕೂ ತುಂಬ ಹೋಲಿಕೆಯಿದೆ. ಮೀರಾಬಾಯಿ ಭಾರತದ ಭಕ್ತಾಗ್ರೇಸರಲ್ಲಿ ಪ್ರಮುಖಳಾಗಿದ್ದಾಳೆ. ನಾಭಾದಾಸ, ಧ್ರುವ ದಾಸ, ವ್ಯಾಸ, ಮಲೂಕದಾಸ ಮೊದಲಾದ ಹಿರಿಯ ಭಕ್ತರು ಈಕೆಯನ್ನು ಕೊಂಡಾಡಿದ್ದಾರೆ. ಈಕೆಯ ಪದಗಳು ಸಂಗೀತ ಶಾಸ್ತ್ರಕ್ಕನುಗುಣವಾಗಿದೆ. ರಾಗ ತಾಳಬದ್ಧವಾಗಿವೆ. ಸೂರದಾಸ ಪದಗಳಂತೆ ಮೀರಾಳ ಗೇಯಪದಗಳು ಜನತೆಯ ಕಂಠಶ್ರೀಯಲ್ಲಿ ನಲಿಯುತ್ತಿವೆ. ಕೆಲವು ಪದಗಳು ರಾಜಸ್ಥಾನೀ ಮಿಶ್ರಿತ ಭಾಷೆಯಲ್ಲಿದ್ದರೆ ಕೆಲವು ಶುದ್ಧ ಬ್ರಜಭಾಷೆಯಲ್ಲಿವೆ. ಸಂಗೀತಗಾರರು ಮೀರಾಳ ಪದಗಳಿಗೆ ವಿಶೇಷ ಪ್ರಚಾರ ನೀಡಿದ್ದಾರೆ. ಮೀರಾಳ ವ್ಯಕ್ತಿತ್ವದಲ್ಲಿ ಕಾವ್ಯ. ಸಂಗೀತ ಮತ್ತು ನೃತ್ಯಕಲೆಗಳ ತ್ರಿವೇಣೀ ಸಂಗಮ ಕಾಣಬಹುದು. ಈಕೆ ಕೃಷ್ಣನನ್ನು ಪತಿಯೆಂದು ಭಾವಿಸಿ ಉಪಾಸನೆ ಮಾಡಿದಳು. ಈ ಭಕ್ತಿಭಾವದ ಉದ್ಗಾರಗಳು ಉತ್ಕಟವಾಗಿವೆ. ಮೀರಾಬಾಯಿಯದು ಹೆಣ್ಣಿನ ಹೃದಯದ ಸಹಜ ಉದ್ಗಾರ. ಈಕೆಯ ಅನನ್ಯತನ್ಮಯತೆ ಹಿಂದೀಸಾಹಿತ್ಯದ ತವನಿಧಿ. ಮಧುರರಸದ ಸಾಕಾರಮೂರ್ತಿ ಎನಿಸಿದ ಮೀರಾಬಾಯಿ ಒಮ್ಮೆ ರೂಪಗೋಸ್ವಾಮಿಯನ್ನು ನೋಡಲು ಹೋದಳಂತೆ. ಆದರೆ ಆತ ತಾನು ಹೆಂಗಸರನ್ನು ನೋಡುವುದಿಲ್ಲ ಎಂದನಂತೆ. ಈ ಲೋಕದಲ್ಲಿ ಪರಮಾತ್ಮನಾದ ಕೃಷ್ಣನೊಬ್ಬನೇ ಪುರುಷ ಎಂದು ಮೀರಾ ಹೇಳಿ ಕಳುಹಿಸದಳಂತೆ. ಮೀರಾಳ ಈ ಮಾತಿನಿಂದ ರೂಪುಗೋಸ್ವಾಮಿಗೆ ಜ್ಞಾನೋದಯವಾಗಿ ಆಕೆಯ ಕಾಲಿಗೆ ಎರಗಿದನಂತೆ. ಇದು ಮೀರಾಬಾಯಿಯ ಮಾಧುರ್ಯಭಾವದ ಅಳತೆಗೆ ಸಾಕ್ಷಿ.

	ಮೀರಾಳದು ಆಧ್ಯಾತ್ಮಿಕ ವಿರಹ. ಗಿರಿಧರ ಗೋಪಾಲ ಎಂದರೆ ಉನ್ಮತ್ತಳಾಗುತ್ತಾಳೆ. ಈಕೆಯ ಗ್ರಂಥಗಳು ಹನ್ನೊಂದು ಎನ್ನಲಾಗಿದೆ. ಇವುಗಳಲ್ಲಿ ಸ್ಛುಟ ಪದ ಮಾತ್ರ ಮೀರಾಳ ಪ್ರಾಮಾಣಿಕ ರಚನೆಯೆಂದು ದೃಡಪಟ್ಟಿದೆ. ಇತರ ಕೃತಿಗಳ ಪ್ರಾಮಾಣಿಕತೆಯ ಬಗ್ಗೆ ವಿದ್ವಾಂಸರು ಇನ್ನೂ ಸಂದಿಗ್ಧ ಭಾವವುಳ್ಳವರಾಗಿದ್ದಾರೆ. ಶತಮಾನಗಳುರುಳಿದರೂ ಕೃಷ್ಣಪ್ರೇಮದ ಅಮರ ಗಾಯಕಿ ಮೀರಾಬಾಯಿ ಪದಗಳು (ಕೀರ್ತನೆಗಳು) ಇಂದಿಗೂ ಸಾಹಿತ್ಯ ಪ್ರಿಯರಿಗೂ ಸಂಗೀತ ಪ್ರೇಮಿಗಳಿಗೂ ವಿಶೇಷ ಆಕರ್ಷಣೆಯಾಗಿ ರಸದೌತಣ ನೀಡುತ್ತಿವೆ.										
	(ವಿ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ